ಕಿರಣಬೆ ಬೇನೆ

ಅಣಬೆಗಳ ತಂಡಕ್ಕೆ ಸೇರಿರುವ ಕಿರಣಬೆ ಎನಿಸಿಕೊಳ್ಳುವ ಪ್ರಪಂಚದಲ್ಲಿ ಎಲ್ಲೆಲ್ಲೂ ಇರುವ ಬೇರೂರಿರುವ ಬೇನೆಯಿದು. ರೋಗಕಾರಕ ಸೂಕ್ಷ್ಮಜೀವಾಣುಗಳಿಂದ ಈ ಬೇನೆಗೆ ಈ ಹೆಸರಾಗಿದೆ (ಆಕ್ಟಿನೊಮೈಕೋಸಿಸ್), ಆರೋಗ್ಯವಂತರಲ್ಲಿ, ಹೆಚ್ಚಾಗಿ ಹಳ್ಳಿಗಳಲ್ಲಿ ವಾಸಿಸುವವರಲ್ಲಿ, ಬಾಯಲ್ಲಿ ಮುಖ್ಯವಾಗಿ ಮೆಂಡಿಕೆ, ಹಲ್ಲುಗಳ ಸುತ್ತಲೂ ಇವು ಇರುತ್ತವೆ. ಸಾಮಾನ್ಯವಾಗಿ ನಿರಪಾಯಕಾರಿಗಳು, ಸೋಂಕಾಗಬೇಕಾದರೆ ತಾವಿನ ಗಾಯ ಮುಖ್ಯ ಜೀವಾಣುಗಳಿಗೆ ಅಂಗಾಂಶಗಳ ಈಡಾಗುವಿಕೆಯೇ ಜೀವಾಣುಗಳು ನುಗ್ಗಿ ರೋಗವುಂಟುಮಾಡಲು ಬಲು ಅತ್ಯಗತ್ಯ ಅಂಶವೆಂದು ನಂಬಲಾಗಿದೆ.

ಯಾವ ಬಗೆಯ ಅಂಗಾಂಶಕ್ಕಾದರೂ ರೋಗ ಹತ್ತಬಹುದು. ಸೋಂಕಾದೆಡೆಯಲ್ಲಿ ಮೆತು ಅಂಗಾಂಶಗಳ ಊತ ಮೊದಲು ಕಾಣಿಸಿಕೊಳ್ಳುವುದು. ಈ ಊದಿರುವ ಅಂಗಾಂಶ ಗಡುಸಾಗುತ್ತ ಬಂದು ಆಮೇಲೆ ಅನೇಕ ಪುಟ್ಟು ಕುರುಗಳಾಗಿ ಅಲ್ಲಲ್ಲಿ ಮೆತುಗೊಳ್ಳುತ್ತದೆ. ಕೊನೆಗೆ ಇವು ಒಡೆದುಕೊಂಡು ನಾಳಿಗಳಾಗಿ ಮೇಲಾಯದಲ್ಲಿ ಆಗುವ ಕಂಡಿಗಳಿಂದ, ಬರಿಯ ಕಂಡಿಗಳಿಂದ, ಬರಿಯ ಕಣ್ಣಿಗೆ ಕಾಣುವ ಗಂಧಕ ಹರುಳುಗಳೆನಿಸಿಕೊಳ್ಳುವ ಸಣ್ಣ ಹಳದಿಯಂಥ ಹರಳುಗಳಿರುವ ಕೀವನ್ನು ಸುರಿಸುತ್ತವೆ. ಹರಳುಗಳು ಕವಲೊಡೆಯುತ್ತಿರುವ ಜೀವಾಣುಗಳು ಹೆಣೆದುಕೊಂಡಿರುವ ಮುದ್ದೆಗಳು, ಕುರುಗಳಲ್ಲಿ ರಕ್ಷಣಾತ್ಮಕ ಜೀವಕಣಗಳ ನಡುವೆ ಇವು ಇರುತ್ತವೆ.

ಸಾಮಾನ್ಯವಾಗಿ ಇವು ಮೂರು ಕಡೆಗಳಲ್ಲಿ ಕಾಣಿಸಿಕೊಳ್ಳತ್ತವೆ. 1 ಮೊಗ ಮತ್ತು ಕುತ್ತಿಗೆಯಲ್ಲಿ; ಬಾಯೊಳಗಿನ ಸಾಮಾನ್ಯವಾಗಿ ಹುಳುಕುಹಲ್ಲಿನೊಳಗಿಂದ ಬಂದ ಸೋಂಕಿನಿಂದ ಮೊದಲಾಗಿ ಅದರಲ್ಲೂ ಕೆಳದವಡೆಯ ಕೋನದ ಬಳಿ ಕಾಣಿಸಿ ಕೊಳ್ಳುತ್ತದೆ. ಈ ಜಾಗದಲ್ಲಿಯೇ ಬಲು ಸಾಮಾನ್ಯ. 2. ಹೊಟ್ಟೆಯಲ್ಲಿ; ಇದು ಸಾಮಾನ್ಯವಾಗಿ ಮೂಗರುಲು (ಕೇಕಂ) ಇಲ್ಲವೇ ಕರುಳವಾಳದಲ್ಲಿ ಮೊದಲಾಗಿ ಬಲ ಬದಿಯ ಕೆಲಗಡೆ ಊದಿಕೊಳ್ಳುವುದು. ಸೋಂಕು ಇಲ್ಲಿಂದ ಹೊಟ್ಟೆಯ ಮುಂದಿನ ಗೋಡೆಗೆ ನೇರವಾಗಿ ಹರಡಿಕೊಳ್ಳಬಹುದು, ಇಲ್ಲವೇ ರಕ್ತ ಹರಿವಿನ ಮೂಲಕ ಯಕೃತ್ತಿಗೆ ಹರಡಿಕೊಂಡು ಅಲ್ಲಿ ಹಲವಾರು ಕುರುಗಳಾಗಬಹುದು. ಈ ಅಂಗದಲ್ಲಿನ ದೊಡ್ಡ ಕುರುವೊಂದು ವಪೆಯ ಮೂಲಕ ಬಲಬದಿಯ ಪೊಳ್ಳಿನೊಳಕ್ಕೆ ಒಡೆದುಕೊಳ್ಳಬಹುದು. 3 ಎದೆಯಲ್ಲಿ: ಶ್ವಾಸಕೋಶಗಳ ಮೊದಲ ಸೋಂಕಾಗಿಯೋ ಹೊಟ್ಟೆಯಿಂದ ಹರಡಿದಂತೆ ಮರುಚಲದ್ದಾಗಿಯೋ ಆಗಬಹುದು.

ರಕ್ತ ಹರಿವುದರ ಮೂಲಕ ಪಕ್ಕದ ಇಲ್ಲವೇ ಮಿದುಳು, ಯಕೃತ್ತು ಮೊದಲಾದ ದೂರದ ಅಂಗಗಳಿಗೆ ಮೇಲಿನ ಮೊದಲೆಡೆಗಳಿಂದ ಹಬ್ಬಿದ ಹೊರತು, ಈ ರೋಗ ಮಾರಕವಲ್ಲ. ದನ, ಬೆಕ್ಕು, ನಾಯಿ, ಕುರಿ, ಹಂದಿ ಮೊದಲಾದವಲ್ಲೂ ಈ ಬೇನೆ ಆಗಬಹುದು. ಆದರೆ ಇದರ ರೋಗಾಣುಗಳ ಪಂಗಡ ಮಾತ್ರ ಬೇರೆ.      

       (ಕೆ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ